Friday, October 15, 2010

ಕನ್ನಡಿಗರಾದ ಕೃಪಾಕರ, ಸೇನಾನಿಗೆ ಗ್ರೀನ್ ಆಸ್ಕರ್


ಖ್ಯಾತ ವನ್ಯಜೀವಿ ಚಲನಚಿತ್ರ ನಿರ್ಮಾಪಕರಾದ ಕೃಪಾಕರ, ಸೇನಾನಿ ಜೋಡಿಗೆ ಪ್ರತಿಷ್ಠಿತ ವೈಲ್ಡ್ ಸ್ಕ್ರೀನ್ ಚಲನಚಿತ್ರೋತ್ಸವದಲ್ಲಿ ಗ್ರೀನ್ ಆಸ್ಕರ್ ಪ್ರಶಸ್ತಿ ದೊರಕಿದೆ. ಏಷಿಯಾಟಿಕ್ ಕಾಡುನಾಯಿಗಳ ಕುರಿತು ಅವರು ನಿರ್ಮಿಸಿರುವ 'ದಿ ಪ್ಯಾಕ್' ಸಾಕ್ಷ್ಯ್ತ ಚಿತ್ರಕ್ಕಾಗಿ ಅವರಿಗೆ ಈ ಪ್ರಶಸ್ತಿ ಸಂದಿದೆ.

'ದಿ ಪ್ಯಾಕ್' ಸಾಕ್ಷ್ಯ ಚಿತ್ರದ ಐದನೇ ಮತ್ತು ಕೊನೆಯ ಕಂತಿಗೆ ಈ ಪ್ರಶಸ್ತಿ ದೊರಕಿದೆ. ಪ್ರಶಸ್ತಿಗಾಗಿ ವಿಶ್ವ ಖ್ಯಾತಿಯ ವನ್ಯಜೀವಿ ಚಲನಚಿತ್ರ ನಿರ್ಮಾಪಕ ಅಟಿನ್ ಭರೋ ಅವರ 'ಲೈಫ್ ಸರಣಿ' ಹಾಗೂ ನ್ಯಾಶನಲ್ ಜಿಯೋಗ್ರಫಿಕ್ ಚಾನೆಲ್‌ನ ಮತ್ತೊಂದು ಚಿತ್ರವು ಸ್ಪರ್ಧಿಸಿದ್ದವು. ಇವೆರಡನ್ನೂ ಹಿಂದಿಕ್ಕಿ 'ದಿ ಪ್ಯಾಕ್' ಪ್ರಶಸ್ತಿಯನ್ನು ಬಾಚಿಕೊಂಡಿರುವುದು ವಿಶೇಷ.

ಇಂಗ್ಲೆಂಡ್‌ನ ಬ್ರಿಸ್ಟಲ್‌ನಲ್ಲಿ ಅಕ್ಟೋಬರ್ 13ರಂದು ನಡೆದ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ವಿಶ್ವ್ವದ ಶ್ರೇಷ್ಠ ವನ್ಯ ಜೀವಿ ವಿಜ್ಞಾನಿ ಡಾ.ಜಾರ್ಜ್ ಶಾಲನ್ ಅವರು ನಿರ್ಮಾಪಕ ಕೃಪಾಕರ, ನಿರ್ದೇಶಕ ಹಾಗೂ ಛಾಯಾಗ್ರಾಹಕ ಸೇನಾನಿ ಅವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಏಷ್ಯಾ ಖಂಡದಲ್ಲಿ ನಿರ್ಮಾಣಗೊಂಡು, ವೈಲ್ಡ್ ಸ್ಕ್ರೀನ್ ಚಿತ್ರೋತ್ಸವದ ಮುಕ್ತ ವಿಭಾಗದಲ್ಲಿ ನಾಮಕರಣಗೊಂಡ ಹಾಗೂ ಪ್ರಶಸ್ತಿ ಪಡೆದ ಏಕೈಕ ಸಾಕ್ಷ್ಯಚಿತ್ರ ಎಂಬ ಹೆಗ್ಗಳಿಕೆಗೆ 'ದಿ ಪ್ಯಾಕ್' ಪಾತ್ರವಾಗಿದೆ. ನೀಲಗಿರಿ ಜೈವಿಕ ವಲಯದಲ್ಲಿ ಬೇಟೆ ನಾಯಿಗಳ ಕುರಿತ ಈ ಸಾಕ್ಷ್ಯಚಿತ್ರವನ್ನು ಚಿತ್ರೀಕರಿಸಲಾಗಿದೆ.

ಕಾಡುನಾಯಿಗಳ ಸಂಕೀರ್ಣ ಬದುಕಿನ ಬಗೆಗೆ ಇದುವರೆಗೂ ಗೊತ್ತಿರದ ಸಂಗತಿಗಳನ್ನು 'ದಿ ಪ್ಯಾಕ್' ಸಾಕ್ಷ್ಯಚಿತ್ರ ಅನಾವರಣಗೊಳಿಸುತ್ತದೆ. ಕೃಪಾಕರ ಮತ್ತು ಸೇನಾನಿ ಜೋಡಿ ನೀಲಗಿರಿ ಕಾಡುಗಳಲ್ಲಿ ಬಹಳ ವರ್ಷಗಳ ಕಾಲ ಶ್ರಮಿಸಿ ಈ ಸಾಕ್ಷ್ಯಚಿತ್ರವನ್ನು ಚಿತ್ರೀಕರಿಸಿದ್ದಾರೆ. ಕಾಡುನಾಯಿಗಳ ಕುರಿತ ಅಚ್ಚರಿ ಸಂಗತಿಗಳನ್ನು ದಿಪ್ಯಾಕ್ ಹೊರಗೆಡುಹಿದೆ.

No comments:

Post a Comment