ಕುವೈತಿನಲ್ಲಿ ನೆಲಸಿರುವ ಕರ್ನಾಟಕದ ನಾಡಿಗರು 2010ರ ಕನ್ನಡ ರಾಜ್ಯೋತ್ಸವವನ್ನು ಅಮೆರಿಕನ್ ಇಂಟರ್ ನ್ಯಾಶನಲ್ ಸ್ಕೂಲಿನ ಡಾ. ಕಮಾಲ್ ಅಲ್-ರಾಯಿಸ್ ಸಭಾಂಗಣದಲ್ಲಿ ಇದೇ ನವೆಂಬರ್ ದಿನಾಂಕ 12ರಂದು ಆಚರಿಸುತ್ತಿದ್ದಾರೆ. ಸಂಜೆ 4ರಿಂದ ರಾತ್ರಿ 9.15ರತನಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮುಖ್ಯ ಅತಿಥಿಗಳಾಗಿ ಕುವೈತಿನಲ್ಲಿ ಭಾರತದ ರಾಯಭಾರಿ ಆಗಿರುವ ಅಜಯ್ ಮಲ್ಹೋತ್ರ ಹಾಗೂ ವಿಶೇಷ ಅತಿಥಿಗಳಾಗಿ ಭಾರತ ಸರ್ಕಾರದ ಅನಿವಾಸಿ ಭಾರತೀಯ ವೇದಿಕೆಯ ಕರ್ನಾಟಕ ಶಾಖೆಯ ಉಪಾಧ್ಯಕ್ಷರಾದ ಕ್ಯಾ.ಗಣೇಶ್ ಕಾರ್ಣಿಕ್ ರವರು ಆಗಮಿಸಲಿದ್ದಾರೆ.
ರಾಜ್ಯೋತ್ಸವದ ವಿಶೇಷ ಆಕರ್ಷಣೆಯಾಗಿ ಕೂಟದ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ಈ ಎಲ್ಲ ಚಟುವಟಿಕೆಗಳನ್ನು ವಿಜಯನಗರ ಸಾಮ್ರಾಜ್ಯದ ವೈಭವವನ್ನು ನೆನಪಿಸಿಕೊಡುವ ನಿರೂಪಣಾ ಮಾಲಿಕೆಯ ಹಂದರದಲ್ಲಿ ಪೋಣಿಸಿ ಪ್ರಸ್ತುತ ಪಡಿಸಲಾಗುವುದು. ಕಾರ್ಯಕ್ರಮಗಳಲ್ಲಿ ನೂರಕ್ಕೂ ಅಧಿಕ ಚಿಣ್ಣರು ಹಾಗೂ ಹಿರಿಯ ಸದಸ್ಯರು ಭಾಗವಹಿಸಲಿದ್ದಾರೆ.
ಕನ್ನಡ ನಾಡಿನ ವಿಶ್ವವಿಖ್ಯಾತ ಯಕ್ಷಿಣಿ, ಮಾತನಾಡುವ ಗೊಂಬೆ ಮತ್ತು ಕಲೆ/ನೆರಳು (ಶಾಡೊ ಪ್ಲೇ) ಮುಂತಾದವುಗಳಲ್ಲಿ ಸಿದ್ಧಹಸ್ತರಾದ ಉದಯ್ ಜಾದೂಗರ್ ಅವರ ಕಾರ್ಯಕ್ರಮ ಎಲ್ಲವಯಸ್ಸಿನ ಮತ್ತು ಎಲ್ಲ ಭಾಷೆಯವರ ಆಕರ್ಷಣೆಯಾಗಲಿದೆ. ಉದಯ್ ರವರು ಬಾಲ್ಯದಿಂದಲೇ ಜಾದೂ ಮತ್ತು ಯಕ್ಷಿಣಿಯಲ್ಲಿ ಆಸಕ್ತರಾಗಿದ್ದು ಈ ವಿದ್ಯೆಯನ್ನು ಭಾರತದ ಪ್ರಖ್ಯಾತ ಜಾದೂಗಾರರಿಂದ ಕರಗತ ಮಾಡಿಕೊಂಡು ನಾಡಿನ ಹೆಸರನ್ನು ವಿಶ್ವದೆಲ್ಲೆಡೆ ಪ್ರಸಿದ್ಧಿಗೊಳಿಸಿದ್ದಾರೆ. ಇವರು ಇಗಾಗಲೇ ಎಂಟು ಸಾವಿರಕ್ಕೂ ಅಧಿಕ ವೇದಿಕೆಗಳ ಮೇಲೆ ಭಾರತ ಹಾಗೂ ಹೊರದೇಶಗಳಲ್ಲಿ ಪ್ರದರ್ಶನ ನೀಡಿ ಅನೇಕ ಪ್ರಶಸ್ತಿ, ಗೌರವಗಳಿಗೆ ಪಾತ್ರರಾಗಿದ್ದಾರೆ.
ಇವರು ನಾಟಕ ಹಾಗೂ ಚಲನಚಿತ್ರಗಳಲ್ಲಿ ಪಾತ್ರವಹಿಸಿದ್ದು ಇವರು ನಿರ್ವಹಿಸಿದ “ಗುರುಗೋವಿಂದ ಭಟ್ಟ”ನ ಪಾತ್ರ ದೂರದರ್ಶನದ ಧಾರಾವಾಹಿ “ಈಶ್ವರ ಅಲ್ಲಾ ನೀನೇ ಎಲ್ಲಾ” ಸಕಲ ಕನ್ನಡಿಗರ ಮನೆ ಮಾತಾಗಿದೆ. ಉದಯ್ ರವರು ಈಗಾಗಲೇ ಹತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದು ಇವುಗಳು ಮ್ಯಾಜಿಕ್, ಹಾಸ್ಯ , ಸೊಡಕು ಹಾಗೂ ವ್ಯಕ್ತಿತ್ವ ವಿಕಾಸ ವಿಷಯಗಳನ್ನೊಳಗೊಂಡಿವೆ. ಕಲಾತ್ಮಕ ಚಲನ ಚಿತ್ರವಾದ “ಯುದ್ಧ ಮತ್ತು ಸ್ವಾತಂತ್ರ್ಯ” ವನ್ನು ನಿರ್ಮಾಣಮಾಡಿ “ದರೋಡೆ” ಎಂಬ ಚಲನ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಕುವೈತ್ ಕನ್ನಡ ಕೂಟ 26 ವರ್ಷಗಳಿಂದ ಕುವೈತಲ್ಲಿ ಅಸ್ತಿತ್ವದಲ್ಲಿದ್ದು ನಿರಂತರವಾಗಿ ದೇಶದ ಮತ್ತು ವಿಶೇಷತಃ ಕನ್ನಡ ನಾಡಿನ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗಳನ್ನು ಯುವ ಪೀಳಿಗೆಗೆ ಮನದಟ್ಟು ಮಾಡುವುದರ ಜೊತೆಗೆ ಕುವೈತಿನ ಜನರಲ್ಲಿ ನಮ್ಮ ಸಂಸ್ಕೃತಿಯ ಪರಿಚಯವನ್ನೂ ನೀಡುತ್ತಿದೆ. ಕುವೈತ್ ಕನ್ನಡ ಕೂಟವು 2007ರಲ್ಲಿ ವಿಶ್ವ ಕನ್ನಡ ಸ್ಮಮೇಳನ ಹಾಗೂ 2009ರಲ್ಲಿ ರಜತ ಮಹೋತ್ಸವವನ್ನು ವಿಜೃಂಬಣೆಯಿಂದ ಆಚರಿಸಿತ್ತು.
ಕುವೈತ್ ಕನ್ನಡ ಕೂಟದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೂಟದ ಅಂತರ್ಜಾಲ ತಾಣವನ್ನು ಸಂಪರ್ಕಿಸಿ.
No comments:
Post a Comment