ಒಂದು ಸುತ್ತಿನ ರಾಜಕೀಯ ಯುದ್ಧ ಮುಗಿಸಿ ಶಾಂತಿಯ ಬಾವುಟವನ್ನು ಯಡಿಯೂರಪ್ಪ ನವರು ಹಾರಿಸುತ್ತಿದ್ದರೆ, ಶಸ್ತ್ರಾಸ್ತ್ರ ಕೆಳಗಿಡಬಯಸದ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಮತ್ತೊಂದು ಸುತ್ತಿನ ಧರ್ಮ-ಅಧರ್ಮದ ನಡುವಿನ ಯುದ್ಧಕ್ಕೆ ಸನ್ನದ್ಧರಾಗುತ್ತಿದ್ದಾರೆ.
ಎತ್ತಿರುವ ಶಸ್ತ್ರವನ್ನು ಕೆಳಗಿಳಿಸಲು ಕುಮಾರಸ್ವಾಮಿ ಸುತಾರಾಂ ತಯಾರಿಲ್ಲ. ಎರಡನೇ ವಿಶ್ವಾಸಮತ ಯಾಚನೆಯಲ್ಲಿ ಯಡಿಯೂರಪ್ಪನವರ ಸರಕಾರ ಗಳಿಸಿದ ಯಶಸ್ಸನ್ನು ಯಶಸ್ಸೆಂದು ತಿಳಿಯಲು ಕುಮಾರ್ ತಯಾರಿಲ್ಲ, ಅನುಭವಿಸಿದ ಸೋಲನ್ನು ಸೋಲೆಂದು ಒಪ್ಪಿಕೊಳ್ಳಲು ಅವರ ಮನಸ್ಸು ಒಪ್ಪುತ್ತಿಲ್ಲ. ಬದಲಿಗೆ, ಯಡಿಯೂರಪ್ಪನವರ ಸರಕಾರವನ್ನು ಶತಾಯಗತಾಯ ಬೀಳಿಸಿಯೇ ತೀರಬೇಕೆಂಬ ಹಠ ಅವರಲ್ಲಿ ಇನ್ನೂ ಜಾಸ್ತಿಯಾದಂತಿದೆ.
ಈ ರಾಜಕೀಯ ಬೆಳವಣಿಗೆಗಳನ್ನು ನಿನ್ನೆ ರಾತ್ರಿಯೇ ಊಹಿಸಿದ್ದೆ. ಬಿಜೆಪಿಗೆ ದಕ್ಕಿರುವ ಜಯ ತಾತ್ಕಾಲಿಕ. ಇದು ಜೆಡಿಎಸ್ ಪಕ್ಷಕ್ಕೆ ಆದ ಹಿನ್ನಡೆಯೇನಲ್ಲ. ಯಡಿಯೂರಪ್ಪ ಮತ್ತು ಅವರ ಶಾಸಕರು ಸಿಹಿ ಹಂಚಿಕೊಳ್ಳಲಿ. ಈ ಸಿಹಿ ಅವರ ಬಾಯಲ್ಲಿ ಹೆಚ್ಚು ದಿನ ಉಳಿಯುವುದಿಲ್ಲ ಎಂದು ಹೇಳಿರುವ ಕುಮಾರಸ್ವಾಮಿ ಬಿಜೆಪಿ ಸರಕಾರಕ್ಕೆ ಮತ್ತಷ್ಟು ಸಂಚಕಾರ ತರುವ ಉದ್ದೇಶದಿಂದ ಪ್ರತಿತಂತ್ರ ರೂಪಿಸಲು ತಂತ್ರಗಾರಿಕೆಯಲ್ಲಿ ಮಗ್ನರಾಗಿದ್ದಾರೆ. ಈ ತಂತ್ರಗಾರಿಕೆಯ ಭಾಗವಾಗಿ ಕಾಂಗ್ರೆಸ್ ನಾಯಕರ ಜೊತೆ ಕುಮಾರಸ್ವಾಮಿಯವರು ಇಂದು ಸಂಜೆ ರಾಜ್ಯಪಾಲರನ್ನು ಮತ್ತೆ ಭೇಟಿ ಮಾಡಿದ್ದಾರೆ.
ಬಿಜೆಪಿಯ ಎಲ್ಲ ಶಾಸಕರೂ ಅನರ್ಹಗೊಂಡ ಶಾಸಕರ ಕುರಿತ ಪ್ರಕರಣದ ತೀರ್ಪು ಕರ್ನಾಟಕದ ಹೈಕೋರ್ಟ್ ನಿಂದ ಬರುವವರೆಗೆ ಕಾಯಲೇಬೇಕು. ಅವರ ಗೆಲುವು ತಾತ್ಕಾಲಿಕ ಎಂದು ಸದ್ಯದಲ್ಲಿಯೇ ಅವರ ಅರಿವಿಗೆ ಬರಲಿದೆ. ಅನರ್ಹಗೊಂಡಿರುವ ಶಾಸಕರಿಗೆ ಹೈಕೋರ್ಟಲ್ಲಿ ಜಯ ಸಿಗಲಿದೆ. ಇನ್ನೊಂದು ಬಾರಿ ವಿಧಾನಸಭೆ ಅಧಿವೇಶನವನ್ನು ಕರೆಯಲೇಬೇಕು. ಆಗ ಬಿಜೆಪಿ ಸೋಲು ಕಟ್ಟಿಟ್ಟಬುತ್ತಿ ಎಂದು ಕುಮಾರ್ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
ಬಿಜೆಪಿಗೆ ಸಿಕ್ಕಿರುವ ಯಶ ನೀರಿನ ಮೇಲಿನ ಗುಳ್ಳೆಯಂತೆ. ಸದ್ಯದಲ್ಲಿಯೇ ಗುಳ್ಳೆ ಒಡೆಯಲಿದೆ. ಯಾರದು ಧರ್ಮ, ಯಾರದು ಅಧರ್ಮ ಎಂಬುದು ಯಡಿಯೂರಪ್ಪನವರಿಗೆ ಸದ್ಯದಲ್ಲಿಯೇ ತಿಳಿಯಲಿದೆ ಎಂದು ಬಹಿರಂಗವಾಗಿ ಸವಾಲ್ ಹಾಕಿದ್ದಾರೆ. ಬಹುಮತ ಸಾಬೀತು ಪಡಿಸಿದ ನಂತರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಯಡಿಯೂರಪ್ಪನವರು, ಇದು ಧರ್ಮ-ಅಧರ್ಮದ ಯುದ್ಧ ಎಂದು ಕುಮಾರಸ್ವಾಮಿ ನೀಡಿದ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ್ದರು.
ಇತ್ತ, ವಿಧಾನಸಭೆಯಲ್ಲಿ ಕಲಾಪವೆಲ್ಲ ಮುಗಿದು ಕಾಂಗ್ರೆಸ್ ನಾಯಕರನೇಕರು ದಸರಾ ಹಬ್ಬದ ಆಚರಣೆಗಾಗಿ ತಮ್ತಮ್ಮ ಮನೆಗಳನ್ನು ಸೇರಿಕೊಳ್ಳುತ್ತಿದ್ದರೆ, ಕುಮಾರಸ್ವಾಮಿ ಮತ್ತೊಂದು ಬಗೆಯ 'ಆಯುಧ ಪೂಜೆ'ಯಲ್ಲಿ ನಿರತರಾಗಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಲು ಮೈಸೂರಿಗೆ ತೆರಳುತ್ತಿದ್ದಾರೆ. ಮುಂದಿನ ಧರ್ಮ-ಅಧರ್ಮ ಯುದ್ಧದಲ್ಲಿ ಜಯ ಯಾರಿಗೆ ಲಭಿಸಲಿದೆ?
No comments:
Post a Comment