ಈಗ ಕೂಟದ ಕಾರ್ಯಕಾರಿ ಸಮಿತಿಯ ಅವಿರತ ಪ್ರಯತ್ನ ಹಾಗೂ ಸಂಸತ್ ಸದಸ್ಯರುಗಳಾದ ಡಾ. ಜಾಕೀ ಬ್ಲೂ, ನ್ಯೂಜಿಲೆಂಡಿನ ವಿರೋಧ ಪಕ್ಷದ ನಾಯಕ ಫಿಲ್ ಗಾಫ್ ಮತ್ತು ಇನ್ನೂ ಅನೇಕರ ನೆರವಿನಿಂದ ಆಕ್ಲೆಂಡ್ ಮಹಾನಗರ ಮಂಡಳಿಯ ಕಟ್ಟಡವೊಂದರ ಗುತ್ತಿಗೆ ಲಭಿಸಿತು. ನಗರದ ಹೃದಯ ಭಾಗದ ತ್ರೀ ಕಿಂಗ್ಸ್ ಬಡಾವಣೆಯಲ್ಲಿರುವ ಫಿಕ್ಲಿಂಗ್ಸ್ ಕನ್ವೆನ್ಷನ್ ಸೆಂಟರ್ ನಲ್ಲಿ ದಿನಾಂಕ 21ನೇ ಆಗಸ್ಟ್ 2010ನೇ ಶನಿವಾರ ಸಂಜೆ ನ್ಯೂಜಿಲೆಂಡ್ ಕನ್ನಡ ಕೂಟದ ನೂತನ ಕೇಂದ್ರ ಆರಂಭವಾಗಿ ಸ್ಥಳೀಯ ಕನ್ನಡಿಗರಿಗೆ ಸಂಭ್ರಮ ಹರ್ಷತಂದಿತು.
ಸಾಂಪ್ರದಾಯಿಕ ಪೂಜೆಯ ನಂತರ, ರತ್ನಾ ವಾಮನ ಮೂರ್ತಿ ಮತ್ತು ಡಾ.ಕಲ್ಬುರ್ಗಿ, ಡಾ. ಜಾಕೀ ಬ್ಲೂ , ನಟೇಶ್ ಮಾರಪ್ಪ, ಜೀತ್ ಸಚದೇವ್ ಅವರುಗಳು ಜ್ಯೋತಿ ಬೆಳಗುವುದರೊಂದಿಗೆ ಕಾರ್ಯಕ್ರಮ ಪ್ರಾರಂಭಿಸಲಾಯಿತು.
ಕನ್ನಡ ಕೂಟದ ಅಧ್ಯಕ್ಷ ರವಿ ಶಂಕರ್ ಅವರು ಎಲ್ಲರನ್ನು ಸ್ವಾಗತಿಸಿ ಸಾವಿರಾರು ಕನ್ನಡ ಪುಸ್ತಕಗಳು, ನಿಯತಕಾಲಿಕಗಳು ಮತ್ತು ಕನ್ನಡ ಚಲನಚಿತ್ರ ಗಳ ಡಿವಿಡಿಗಳು ಇರುವ ಕೂಟದ ಸುಸಜ್ಜಿತ ಗ್ರಂಥಾಲಯ, ಕನ್ನಡ ಶಾಲೆ ಮುಂತಾದ ಸೌಲಭ್ಯಗಳ ಸದುಪಯೋಗ ಮಾಡಿಕೊಳ್ಳುವಂತೆ ಸದಸ್ಯರಿಗೆ ಕರೆಯಿತ್ತರು.
ಇದೊಂದು ಅವಿಸ್ಮರಣೀಯ ದಿನ ಎಂದು ಬಣ್ಣಿಸಿದ ಕಾರ್ಯದರ್ಶಿ ಪ್ರಕಾಶ್ ಬಿರಾದರ್ ಅವರು ಕೂಟದ ಚಟುವಟಿಕೆಗಳನ್ನು ವಿವರಿಸಿ ಸಂಸ್ಥಾಪಕರಾದ ದಿ. ಪ್ರಾಚಾರ್ಯ ವಾಮನ ಮೂರ್ತಿ, ಡಾ. ಲಿಂಗಪ್ಪ ಕಲ್ಬುರ್ಗಿ, ಭಾರತೀಯ ಸಮಾಜ, ಆಕ್ಲೆಂಡ್ ಇಂಡಿಯನ್ ಅಸೋಸಿಯೇಶನ್, ದಿ ಇಂಡಿಯನ್ ವೀಕೆಂಡರ್ ಸ್ಥಳೀಯ ಪತ್ರಿಕೆಯ ಮುಖ್ಯ ಸಂಪಾದಕ ದೇವ್ ನಾಡಕರ್ಣಿ, ಗ್ರಂಥಾಲಯಕ್ಕೆ ತಾತ್ಕಾಲಿಕವಾಗಿ ಆಶ್ರಯ ನೀಡಿ ನೆರವಾಗಿದ್ದ ನಟೇಶ್ ಮಾರಪ್ಪ ಮತ್ತು ಕೂಟದ ಬೆಳವಣಿಗೆಗೆ ಶ್ರಮಿಸುತ್ತಿರುವ ಎಲ್ಲರನ್ನು ವಂದಿಸಿದರು. ಉಪಾಧ್ಯಕ್ಷ ವಸಂತ ಕುಮಾರ್, ಕೂಟದ ಅನೇಕ ಹಿರಿಯ ಕಿರಿಯ ಸದಸ್ಯರುಗಳು ಮತ್ತು ಹಲವಾರು ಭಾರತೀಯ ಸಂಘ ಸಂಸ್ಥೆಗಳ ಸದಸ್ಯರು ಈ ಶುಭ ಸಂದರ್ಭದಲ್ಲಿ ಹಾಜರಿದ್ದರು.
ನ್ಯೂಜಿಲೆಂಡ್ ಕನ್ನಡ ಕೂಟದ ಬಗ್ಗೆ : ಈ ಸಂಸ್ಥೆ ಸಂಖ್ಯಾಬಲದಿಂದ ಚಿಕ್ಕದಾದರೂ ನ್ಯೂಜಿಲೆಂಡಿನ ಭಾರತೀಯ ಸಂಘ ಸಂಸ್ಥೆಗಳ ಪೈಕಿ ಅತ್ಯಂತ ಕ್ರಿಯಾಶಾಲಿ ಎಂದು ದೇವ್ ನಾಡಕರ್ಣಿ ಹೇಳಿದ ಮಾತು ಅತಿಶಯೋಕ್ತಿಯಲ್ಲ.
ಕನ್ನಡ ರಾಜ್ಯೋತ್ಸವ ಸೇರಿದಂತೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು, ವಾರ್ಷಿಕ ಕ್ರೀಡಾ ದಿನ, ಬೇಸಗೆಯ ಪಿಕ್ನಿಕ್, ಕನ್ನಡ ಚಲನಚಿತ್ರ ಗೀತೆಗಳ ಅಂತಾಕ್ಷರಿ ಸ್ಪರ್ಧೆ, ಮಕ್ಕಳ ಕಾರ್ಯಕ್ರಮ, ತಿಂಗಳಿಗೊಂದು ಸಿನಿಮಾ, ಕನ್ನಡ ಶಾಲೆ, ಕೀವಿ ಕನ್ನಡಿಗ ಪತ್ರಿಕೆ, ಸ್ಥಳೀಯ ಭಾರತೀಯ ಅಂತರ ಭಾಷಾ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸುವುದು, ವಾರಕ್ಕೊಮ್ಮೆ ಕನ್ನಡ ರೇಡಿಯೋ ಕಾರ್ಯಕ್ರಮ ಪ್ರಸಾರ ಹೀಗೆ ಹಲವಾರು ಕನ್ನಡಮಯ ಚಟುವಟಿಕೆಗಳನ್ನು ವರ್ಷವಿಡೀ ಹಮ್ಮಿಕೊಂಡಿರುತ್ತದೆ. ಸದಸ್ಯರು ಮತ್ತು ಅವರ ಕುಟುಂಬದವರ ಕನ್ನಡಾಭಿಮಾನ ಉಳಿಸಿ ಬೆಳೆಸುವ ನಿರಂತರ ಪ್ರಯತ್ನ ಮಾಡುತ್ತಿರುವ ಕನ್ನಡ ಕೂಟ ಹೆಚ್ಚಿನ ಯಶಸ್ಸು ಗಳಿಸಲಿ ಎಂಬುದೇ ಎಲ್ಲರ ಆಶಯವಾಗಿದೆ. ಕೀವಿಗನ್ನಡಂ ಗೆಲ್ಗೆ.
No comments:
Post a Comment