ದಕ್ಷಿಣ ಕ್ಯಾಲಿಫೊರ್ನಿಯಾದ ಕರ್ನಾಟಕ ಸಾಂಸ್ಕೃತಿಕ ಸಂಘ 'ಕನ್ನಡ ಕಲಿ' ಆಕಾಶ್ ದೀಕ್ಷಿತ್‌ಗೆ 'ಸಾಂಸ್ಕೃತಿಕ ಪ್ರಜ್ಞೆ' ಪ್ರಶಸ್ತಿಯನ್ನು ಕೊಟ್ಟು ಫೆಬ್ರವರಿ 21ರಂದು ನಡೆದ ನಾಟಕೋತ್ಸವದ ಸಂದರ್ಭದಲ್ಲಿ ಪುರಸ್ಕರಿಸಿತು.
ಈಗ ಆಕಾಶ್ ಸಂಘದ ಸಾಂಸ್ಕೃತಿಕ ರಾಯಭಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2001ರಲ್ಲಿ ಸ್ಥಾಪಿತವಾದ ಈ ಪ್ರಶಸ್ತಿಯನ್ನು ವರ್ಷಕ್ಕೊಮ್ಮೆ ಕನ್ನಡ ಸಂಸ್ಕೃತಿಯನ್ನು ಮೈಗೂಡಿಸಿಕೊಂಡ ಹೈಸ್ಕೂಲ್ ವಿಧ್ಯಾರ್ಥಿಗೆ ಕೊಡಲಾಗುತ್ತಿದೆ. ಇದಕ್ಕಾಗಿ ನಿಗದಿತ ವಿಷಯದ ಮೇಲೆ ಒಂದು ಪ್ರಬಂಧ ಬರೆಯಬೇಕು. ‘ನಾನು ಕನ್ನಡಿಗ’ ಎಂಬ ಪ್ರಶಸ್ತಿ ವಿಜೇತ ಪ್ರಬಂಧ ಬರೆದು ಆಕಾಶ್ ಈ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.
ಈ ವರ್ಷ, ಒಂದು ರಸಪ್ರಶ್ನೆ ಕಾರ್ಯಕ್ರಮ ಕೂಡ ಹಮ್ಮಿಕೊಳ್ಳಲಾಗಿತ್ತು. ಕರ್ನಾಟಕ ಮತ್ತು ಕನ್ನಡ ಕುರಿತ ಸಾಂಸ್ಕೃತಿಕ ಪ್ರಶ್ನೆಗಳಲ್ಲದೆ, ಕನ್ನಡ ಓದಿ ಕನ್ನಡದಲ್ಲೆ ಉತ್ತರಿಸಬೇಕಾಗಿತ್ತು. ಇಲ್ಲಿನ ಕನ್ನಡ ಕಲಿ ತರಗತಿಗಳಲ್ಲಿ ತರಬೇತಿ ಹೊಂದಿದ ಮಕ್ಕಳಿಗೆ ಇದು ಸುಲಭವೆ ಆಗಿತ್ತು.
ಆಕಾಶ್ ಬಗ್ಗೆ : ಕಳೆದ 17 ವರ್ಷಗಳಿಂದ, ಅಂದರೆ ಹುಟ್ಟಿದಂದಿನಿಂದ, ಆಕಾಶ್ ಕೆ.ಸಿ.ಎ.ದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸದ್ಯ, ಅದರ ಯುವ ಸಮಿತಿಯ ಅಧ್ಯಕ್ಷನೂ ಆಗಿ ಕನ್ನಡ ಸೇವೆ ಮುಂದುವರಿಸಿದ್ದಾರೆ. ಯುವ ಸದಸ್ಯರಿಗೆ ಬೇಕಾದ ಕಾರ್ಯಕ್ರಮಗಳನ್ನು ರೂಪಿಸಿ ಧನಸಂಗ್ರಹ ಕೂಡ ಮಾಡಿದ್ದಾರೆ. ಕನ್ನಡದಲ್ಲಿ ಎಮ್.ಸಿ. ಮಾಡಿದ್ದಾರೆ. ಸಂಘದ ಮ್ಯಾಗ್‌ಝೀನ್ 'ಸಂಗಮ'ದಲ್ಲಿ ಆಕಾಶ್ ಬರೆದಿರುವ ಅನೇಕ ಲೇಖನಗಳು ಪ್ರಕಟವಾಗಿವೆ.
ಅರ್ವೈನ್ ಜಾಗತಿಕ ಹಳ್ಳಿ ಹಬ್ಬಕ್ಕೆ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯೋಜಿಸುವಲ್ಲಿ ಸಹಾಯಹಸ್ತ ಚಾಚಿದ್ದಾರೆ ಆಕಾಶ್. ಸಂಗೀತದಲ್ಲಿ ತುಂಬ ಆಸಕ್ತಿ ಹೊಂದಿರುವ ಆಕಾಶ್, “ತಬಲ ಕಲಿಕೆ ಎಲ್ಲ ಕೆಲಸಗಳಲ್ಲಿ ಏಕಾಗ್ರತೆಯಿಂದ ತೊಡಗಿಸಿಕೊಳ್ಳಲು ನನಗೆ ತುಂಬಾ ಸಹಕಾರಿಯಾಗಿದೆ, ಅಲ್ಲದೆ ಸಮಾಧಾನ ಕೊಡುತ್ತದೆ” ಎಂದಿದ್ದಾರೆ.
No comments:
Post a Comment